ಪಾಡಿಗಾರು ವೆಂಕಟರಮಣ ಆಚಾರ್ಯರದು ಕನ್ನಡ ಪತ್ರಿಕೋದ್ಯಮ ಮತ್ತು ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಹೆಸರು. ಜೀವನೋಪಾಯಕ್ಕಾಗಿ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಅವಲಂಬಿಸಿದ್ದರೂ, ಮೂಲಭೂತವಾಗಿ ಅವರು ಸಾಹಿತ್ಯಕ ಒಲವಿನವರಾಗಿದ್ದು ಕನ್ನಡ ಸಾಹಿತ್ಯ ಲೋಕದ ವಿವಿಧ ಆಯಾಮಗಳಲ್ಲಿ ಸಮರ್ಥವಾಗಿ ಕೈಯಾಡಿಸಿ ಸೈ ಎನಿಸಿಕೊಂಡವರು "ಸೃಜನಾತ್ಮಕ-ಸಾಹಿತ್ಯ" ಎಂಬ ಹಣಿಪಟ್ಟಿಯಡಿಯಲ್ಲಿ ಬರುವ ಅವರ ಬರಹಗಳ ಸಂಖ್ಯೆ ಮತ್ತು ಗಾತ್ರದಲ್ಲಿ ಸೀಮಿತವಾಗಿದ್ದರೂ ಗುಣಮಟ್ಟದಲ್ಲಿ ಅವು ಅಪ್ಪಟ ಚಿನ್ನ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಓರ್ವ ಪತ್ರಿಕಾ ಸಂಪಾದಕರಾಗಿ ತನ್ನ ವೃತ್ತಿ ಜೀವನದ ಬಹುಪಾಲು ಬೇರೆಯವರು ಬರೆದದ್ದನ್ನು ತಿದ್ದಿ ತೀಡಿ ಪ್ರಕಟನೆಗೆ ಯೋಗ್ಯವೆನಿಸಲು ಶ್ರಮಿಸಿದ ಅವರಿಗೆ ಸಾಹಿತ್ಯರಂಗದಲ್ಲಿ ತನ್ನದೇ ಆದ ಕೃಷಿ ಮಾಡಲು ಸಮಯಾವಕಾಶ ಸಾಕಷ್ಟು ಇರಲಿಲ್ಲ.
1915 ಫೆಬ್ರವರಿ 6ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯರು ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡು ಸೋದೆ ಮತ್ತು ಉಡುಪಿಯಲ್ಲಿ ತನ್ನ ಬಾಲ್ಯವನ್ನು ತೀರ ಬಡತನದಲ್ಲಿ ಕಳೆದರು. ಮೆಟ್ರಿಕ್‍ವರೆಗೆ ಹಾಗೂ ಹೀಗೂ ವಿದಾಭ್ಯಾಸವನ್ನು ಉಚ್ಚ ಶ್ರೇಣಿಯಲ್ಲಿ ಪೂರೈಸಿದರಾದರೂ ಆರ್ಥಿಕ ಅಡಚಣೆಯಿಂದಾಗಿ ಕಲಿಕೆಯನ್ನು ಅವರಿಗೆ ಮುಂದುವರಿಸಲು ಸಾಧ್ಯವಾಗದೇ ಹೋಯಿತು. ಅಲ್ಲಿ ಇಲ್ಲಿ ಚಾಕರಿ ಮಾಡಿ ಸಮಯಸವೆಸುವ ಪರಿಸ್ಥಿತಿಯಲ್ಲಿಯೂ, ಸಾಹಿತ್ಯಾಸಕ್ತಿಯನ್ನು ಜೀವಂತವಾಗಿರಿಸಿಕೊಂಡು ಪ್ರಚಲಿತ ಸಾಹಿತ್ಯ ಪ್ರಕಾರಗಳ ಆಳ ಅಗಲಗಳನ್ನು ಅಳೆದು ಆ ತೊರೆಯಲ್ಲಿ ತನ್ನದೇ ಆದ ಪುಟ್ಟ ದೋಣಿಗಳನ್ನು ತೇಲಿಬಿಡಲು ಅವರು ಮಾಡಿದ ಪ್ರಾಮಾಣಿಕ ಪ್ರಯತ್ನ ನಿಜವಾಗಿಯೂ ಒಂದು ಅಚ್ಚರಿಯ ವಿಷಯ.
ಪಾವೆಂ ಆಚಾರ್ಯರು 1940ರ ಸುಮಾರು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕಾಲಯಕ್ಕೆ ಸೇರಿದಂದಿನಿಂದ ಅವರ ಪತ್ರಿಕೋದ್ಯಮದ ನಂಟು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತೆನ್ನಬಹುದು. ಅವರ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ಗುರುತಿಸಿದ ಮೊಹರೆ ಹನುಮಂತರಾಯರು ಆಚಾರ್ಯರನ್ನು ತಡಮಾಡದೇ ಪತ್ರಿಕಾಲಯದ ಸಂಪಾದಕೀಯ ವಿಭಾಗಕ್ಕೆ ಸೆಳೆದು ‘ಕರ್ಮವೀರ’ ವಾರಪತ್ರಿಕೆಯ ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸಿದರು. ಮುಂದೆ 1956ರಲ್ಲಿ ‘ಕಸ್ತೂರಿ’ ಮಾಸಪತ್ರಿಕೆಯ (ಇಂಗ್ಲೀಷ್ ರೀಡರ್ಸ್ ಡೈಜಸ್ಟ ಮಾದರಿ) ಹೊರಡಿಸುವಾಗ ಪಾವೆಂ ಅವರನ್ನು ಸಂಪಾದಕತ್ವದ ಹೊಣೆ ಹೊರಲು ನಿಯೋಜಿಸಿದರು. ಮುಂದಿನದು ಇತಿಹಾಸ. ಕಸ್ತೂರಿ ‘ಕನ್ನಡಕ್ಕೊಂದೇ ಕಸ್ತೂರಿ’ ಯಾಗಿ ಸುಮಾರು ಎರಡು ದಶಕಗಳಷ್ಟು ಕಾಲ ಕನ್ನಡಿಗರ ಕಣ್ಮಣಿಯಾಗಿ ಇನ್ನಿಲ್ಲದಂತೆ ಮೆರೆಯಿತು. ತನ್ನ ಸಂಪಾದಕೀಯ ಮುಂದಾಳ್ತನದಲ್ಲಿ ಆಚಾರ್ಯರು ತಾವೇ ವೈವಿಧ್ಯಮಯ ಮೌಲಿಕ ಲೇಖನಗಳನ್ನು ಬರೆದು ಬೇರೆಯವರಿಂದ ಬರೆಸಿ ಕಸ್ತೂರಿಯ ಕಂಪನ್ನು ಕರ್ನಾಟಕದಾದ್ಯಂತ ಪಸರಿಸಿದರು.
ಆಚಾರ್ಯರ ಬಹುಪಾಲು ಬರಹಗಳು ‘ಲಾಂಗೂಲಾಚಾರ್ಯ’ ಎಂಬ ಹೆಸರಿನಡಿಯಲ್ಲಿ ಮೂಡಿಬಂದ ಸಮಾಜದ ಅಂಕುಡೊಂಕುಗಳನ್ನು ಸಹಾನುಭೂತಿಯಿಂದ ವೀಕ್ಷಿಸಿ ಬರೆದ ವಿದ್ವತ್ಪೂರ್ಣ ಹಾಸ್ಯ ಲೇಪಿತ ಹರಟೆಗಳು. ಇದಲ್ಲದೆ ವೈಜ್ಞಾನಿಕ ,ಐತಿಹಾಸಿಕ, ವೈದ್ಯಕೀಯ, ಆರ್ಥಿಕ, ರಾಜಕೀಯ, ಸಾಮಾಜಿಕ, ಅಂತಾರಾಷ್ಟ್ರೀಯ ವಿದ್ಯಮಾನ, ಸಾಹಿತ್ಯಿಕ, ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ಲೇಷಣಾತ್ಮಕ, ವೈಚಾರಿಕ ಲೇಖನಗಳು ಪುಂಖಾನುಪುಂಖವಾಗಿ ಅವರ ಲೇಖನಿಯಿಂದ ಹರಿದು ಬಂದಿವೆ.
ಕಾವ್ಯ ಪಾವೆಂರ ನೆಚ್ಚಿನ ಸಾಹಿತ್ಯ ಪ್ರಕಾರ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚೆನು ಇಲ್ಲ. ಪಾರಂಪರಿಕ, ನವೋದಯ ಮತ್ತು ನವ್ಯ ಎನ್ನಬಹುದಾದ ಎಲ್ಲ ಕಾವ್ಯ ಪ್ರಕಾರಗಳಲ್ಲೂ ಅವರು ರಚಿಸಿದ ಕವನಗಳು ಸಾರ್ವತ್ರಿಕವಾಗಿ ಶ್ಲಾಘಿಸಲ್ಪಟ್ಟಿವೆ.
ಶಬ್ದಗಳ ಮೂಲ ಮತ್ತು ವಿಕಸನಕ್ಕೆ ‘ಪದಾರ್ಥ ಚಿಂತಾಮಣಿ’ ಎಂಬ ಶಿರೋನಾಮೆಯಡಿಯಲ್ಲಿ ಆಚಾರ್ಯರು ಬರೆದ ಕುತೂಹಲಕಾರಿ ಕಿರು ಲೇಖನಗಳು ಅವರ ಸಂಶೋಧನಾ ಪ್ರವೃತ್ತಿಗೆ , ಪ್ರತಿಭೆಗೆ, ಪಾಂಡಿತ್ಯಕ್ಕೆ ಕನ್ನಡಿ ಹಿಡಿದಿವೆ. ಎಂಥ ಗಂಭೀರ ವಿಷಯಗಳನ್ನು ಎಷ್ಟು ಸುಲಲಿತವಾಗಿ ,ರಂಜನೀಯವಾಗಿ ಸಾದರ ಪಡಿಸಬಹುದು ಎಂಬುದಕ್ಕೆ ಈ ಲೇಖನಗಳೇ ಸಾಕ್ಷಿ.
ಪಾವೆಂರವರಿಗೆ ಉಚ್ಚ ಶಿಕ್ಷಣಕ್ಕಾಗಿ ಕಾಲೇಜು ಮೆಟ್ಟಿಲೇರಲು ಸಾಧ್ಯವಾಗದಿದ್ದರೂ ಅವರ ಬರವಣಿಗೆಯಲ್ಲಿ ವ್ಯಕ್ತವಾಗುವ ಪ್ರತಿಭೆ, ಅರಿವಿನ ವಿಸ್ತಾರ, ಸಮಸ್ಯೆಗಳನ್ನು ಪೂರ್ವಾಗ್ರಹವಿಲ್ಲದೇ ವಿಶ್ಲೇಷಿಸುವ, ವಿಮರ್ಷಿಸುವ ಸಾಮಥ್ರ್ಯ, ವೈಚಾರಿಕತೆ ಮುಂತಾದವು ಎಂಥ ಡಾಕ್ಟರೇಟ್ ಪಡೆದ ವಿಶ್ವವಿದ್ಯಾಲಯದ ಪ್ರೊಫೆಸರ್‍ಗಳನ್ನೂ ಬೆರಗುಗೊಳಿಸುವಂಥದ್ದು. ಪತ್ರಿಕಾಲಯದವರ ಸಹವರ್ತಿಗಳು ಪಾವೆಂರವರನ್ನು ‘ಸರ್ವಜ್ಞಾಚಾರ್ಯ’ ರೆಂದೇ ಕರೆಯುತ್ತಿದ್ದರು!
ತಮ್ಮ ಬಹುಜ್ಞಾನದ ಬಗ್ಗೆ ಆಚಾರ್ಯರು ಎಂದೂ ಬೀಗಿದವರಲ್ಲ. ಜೀವನದುದ್ದಕ್ಕೂ ಸರಳ, ಸಾಮಾನ್ಯ, ಸಂಭಾವಿತ, ಸಾತ್ವಿಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದವರು. ಸರಸ್ವತಿಯ ಕೃಪೆ ಅವರ ಮೇಲೆ ಧಾರಾಲವಾಗಿದ್ದರೂ ಧನಲಕ್ಷೀದೇವಿ ಅವರತ್ತ ಸುಳಿಯಲು ಮನಸ್ಸು ಮಾಡಲೇ ಇಲ್ಲ. (ಕೈಹಿಡಿದ ಹೆಂಡತಿಯ ಹೆಸರು ಮಾತ್ರ ಲಕ್ಷೀದೇವಿ) ಪದವಿ ಪ್ರಶಸ್ತಿಗಳಿಗಾಗಿ ಅವರೆಂದೂ ಹಾತೊರೆಯಲಿಲ್ಲ. ಆದರೂ ಜೀವನದ ಸಂಜೆಯಲ್ಲಿ ಹಲವಾರು ಸಾಹಿತ್ಯ ಪ್ರಶಸ್ತಿಗಳು ಅವರನ್ನರಸಿ ಬಂದವು. ಪತ್ರಿಕೋದ್ಯಮಕ್ಕಾಗಿ ನೀಡಲಾಗುವ ಪ್ರತಿಷ್ಟಿತ ‘ಗೋಯೆಂಕಾ ಪ್ರಶಸ್ತಿ’ (1992) ಸ್ವೀಕರಿಸಿದ ಒಂದು ವಾರದಲ್ಲೇ ಅವರು ನಮ್ಮನ್ನಗಲಿದರು.
1915 ಫೆಬ್ರವರಿ 6 | - | ಜನನ, ಕುಂಜುಬೆಟ್ಟು, ಉಡುಪಿ |
1916 | - | ಸ್ಥಾನಪಲ್ಲಟ, ಸೋದೆಗೆ |
1919 ನವೆಂಬರ್ | - | ತಂದೆಯ ಮರಣ, ಸೋದೆಯಲ್ಲಿ |
1920 | - | ಅಕ್ಷರಾಭ್ಯಾಸ |
1922 | - | ಇಂಗ್ಲೀಷ್ ಅಕ್ಷರಾಭ್ಯಾಸ |
1923 | - | ಉಡುಪಿಗೆ ಸ್ಥಾನಪಲ್ಲಟ, ಕುಂಜುಬೆಟ್ಟಿನಲ್ಲಿ ವಸತಿ |
1923 ಜೂನ್ | - | ಶಾಲಾರಂಭ, ಉಡುಪಿ ಅನಂತೇಶ್ವರ ಎಲಿಮೆಂಟರಿ ಶಾಲೆ |
1926 | - | ಪ್ರಥಮ ಪದ್ಯರಚನೆ (ಷಟ್ಪದಿ) |
1926 ಜೂನ್ | - | ಹೈಸ್ಕೂಲ್ ಸೇರ್ಪಡೆ, ಉಡುಪಿ ಬೋರ್ಡ್ ಹೈಸ್ಕೂಲ್ |
1931 | - | ಬಂಗಾಲಿ ಅಭ್ಯಾಸ, ಸ್ವಯಂ ಶಿಕ್ಷೆ |
1932 ಮೇ | - | ಎಸ್.ಎಸ್.ಎಲ್.ಸಿ. ತೇರ್ಗಡೆ, ಶಾಲೆಗೆ ಪ್ರಥಮ |
1932 ಜೂನ್ | - | ಉಪಾಧ್ಯಾಯವೃತ್ತಿ, ಉಡುಪಿಯ ಕಡಿಯಾಳಿ ಶಾಲೆಯಲ್ಲಿ |
1932 | - | ರವೀಂದ್ರರ ಪ್ರಭಾವದಲ್ಲಿ ರೋಮ್ಯಾಂಟಕ್ ಕವನ ಶಾಲೆಯಲ್ಲಿ |
1933 ಮೇ | - | ‘ಜಯಕರ್ನಾಟಕ’ದಲ್ಲಿ ಪ್ರಥಮ ಕವನ(‘ಉದ್ಗಾರ’)ದ ಪ್ರಕಟನೆ |
1933 | - | ಉಪಾಧ್ಯಾಯವೃತ್ತಿ, ತ್ಯಾಗ, ಅಂಗಡಿ ಗುಮಾಸ್ತೆಯಾದದ್ದು, ಉಡುಪಿ ಎಸ್.ಯು.ಪಣಿಯಾಡಿಯವರ ಅಂಗಡಿ, ಮುದ್ರಣಾಲಯಗಳಲ್ಲಿ |
1933 | - | ವಾಣಿಜ್ಯ ಲೆಕ್ಕದ ಸ್ವಯಂ ಶಿಕ್ಷೆ |
1935 | - | ತುಳುನಾಡು ಪ್ರೆಸ್: ಉಡುಪಿಯಲ್ಲಿ ಲೆಕ್ಕಿಗ, ಮುದ್ರಕ |
1935 | - | ಕೆ. ಹೊನ್ನಯ್ಯ ಶೆಟ್ಟರೊಡನೆ ಕನ್ನಡ ಪ್ರಾತಿನಿಧಿಕ ಕಥಾಸಂಗ್ರಹ ‘ಮಧುವನ’ ಸಂಪಾದನೆ |
1936 | - | ‘ಕಾವ್ಯಸಾಮ್ರಾಜ್ಯ’ದಲ್ಲಿ ಕವನ ಪ್ರಕಟನೆ |
1937 | - | ಪಣಿಯಾಡಿಯವರ ಮಣಿಪಾಲ ಪವರ್ ಪ್ರೆಸ್ಸಿನ ಮೇನೇಜರ್ |
1937 | - | ಪಣಿಯಾಡಿಯವರ ‘ಅಂತರಂಗ’ ಮಾಸಪತ್ರಿಕೆಯ ಸಂಪಾದಕ ಬಳಗದಲ್ಲಿ ಸೇರಿದ್ದು |
1937 | - | ‘ಅಂತರಂಗ’ದಲ್ಲಿ ಪ್ರಥಮ ಸ್ವತಂತ್ರ ಹಾಸ್ಯಕಥೆ ಪ್ರಕಟನೆ |
1937 ಮೇ 30 | - | ಮದುವೆ, ಕಿದಿಯೂರು, ಉಡುಪಿ |
1940 | - | ಪ್ರಥಮ ಸ್ವತಂತ್ರ ಕಥೆ ಪ್ರಕಟನೆ |
1940 | - | ಪಣಿಯಾಡಿಯವರ ಸಂಸ್ಥೆಗಳು ಮುಚ್ಚಿದ್ದು, ಅರೆ ನಿರುದ್ಯೋಗ ಸಾಲ-ಸೋಲ |
1940 ಡಿಸೆಂಬರ್ 31 | - | ಸ್ಥಾನಪಲ್ಲಟ, ಮದ್ರಾಸಿಗೆ ಹೋಟೆಲ್ ಗುಮಾಸ್ತೆಯಾಗಿ |
1942 ಏಪ್ರಿಲ್ 7 | - | ಮದ್ರಾಸಿನಲ್ಲಿ ಬಾಂಬ್ –ಕೋಲಾಹಲ |
1942 ನವೆಂಬರ್ 20 | - | ಹುಬ್ಬಳ್ಳಿಗೆ ಸ್ಥಾನಪಲ್ಲಟ, ‘ಸಂಯುಕ್ತ ಕರ್ನಾಟಕ’ಕ್ಕೆ ಪ್ರಿಂಟಿಂಗ್ ಸೂಪರಿಂಟೆಂಡೆಂಟ್ |
1943 | - | ‘ಕರ್ಮವೀರ’ದಲ್ಲಿ ಬರೆವಣಿಗೆ ಆರಂಭ |
1943 | - | ‘ರಶಿಯದ ರಾಜ್ಯಕ್ರಾಂತಿ’ ಪುಸ್ತಕ ರಚನೆ, ಪ್ರಕಟನೆ ಧಾರವಾಡದ ಮಿಂಚಿನ ಬಳ್ಳಿಯಲ್ಲಿ |
1944 ಜನವರಿ | - | ‘ಕರ್ಮವೀರ’ ಪರ್ಯಾರ ಸಂಚಿಕೆಯ ಸ್ವತಂತ್ರ ಸಂಪಾದನೆ |
1950 | - | ‘ವಾಸನಾ’ ಬಂಗಾಲಿ ಕಾದಂಬರಿಯ ಅನುವಾದ |
1950 ಜೂನ್ | - | ‘ಕರ್ಮವೀರ’ದಲ್ಲಿ ‘ಲಾಂಗೂಲಾಚಾರ್ಯ’ ನಾಮದಿಂದ ಹರಟೆ ಬರೆಯಲು ತೊಡಗಿದ್ದು |
1951 ನವೆಂಬರ್ | - | ತಾಯಿಯ ಮರಣ |
1952 | - | ‘ನವನೀರದ’ ಕವನ ಸಂಗ್ರಹ ಪ್ರಕಟನೆ |
1953 | - | ‘ನವನೀರದ’ಕ್ಕೆ ಮುಂಬಯಿ ಸರ್ಕಾರದ ಬಹುಮಾನ |
1956 ಸೆಪ್ಟೆಂಬರ್ | - | ‘ಕಸ್ತೂರಿ’ಯ ಆರಂಭ: ಅದರ ಪ್ರಥಮ ಸಂಪಾದಕನಾದದ್ದು |
1959 | - | ‘ದಕ್ಷಿಣ ಭಾರತದ ಪತ್ರಿಕೋದ್ಯೋಗಿಗಳೊಡನೆ ಉತ್ತರ ಭಾರತ ಸಂಚಾರ |
1965 | - | ‘ಪ್ರಥಮ ನಗೆಬರಹ ಸಂಗ್ರಹ ‘ಪ್ರಹಾರ’ ಪ್ರಕಟನೆ |
1972 | - | ‘ಸ್ವತಂತ್ರ ಭಾರತ’ (ಇಪ್ಪತ್ತೈದು ವರ್ಷಗಳ ಸಿಂಹಾವಲೋಕನ) ಪ್ರಕಟನೆ |
1974 ಅಕ್ಟೋಬರ್ 31 | - | ತೀವ್ರ ಅಸ್ವಸ್ಥದಿಂದ ಆಸ್ಪತ್ರೆ ಸೇರಿದ್ದು |
1975 ಜನವರಿ 15 | - | ‘ಕಸ್ತೂರಿ’ ಸಂಪಾದಕತ್ವಕ್ಕೆ ರಾಜೀನಾಮೆ, ನಿವೃತ್ತಿ |
1975 | - | ಹುಬ್ಬಳ್ಳಿಯ ಮೂರುಸಾವಿರ ಮಠದ ಸ್ವಾಮಿಗಳವರಿಂದ ಸನ್ಮಾನ |
1976 | - | ‘ಲೋಕದ ಡೊಂಕು’ ಪ್ರಕಟನೆ. ಮೈಸೂರಿನ ಡಿ.ವಿ.ಕೆ. ಮೂರ್ತಿ ಅವರಿಂದ |
1977 | - | ‘ವಿಪರೀತ ನಗೆಬರಹಗಳ ಸಂಗ್ರಹ , ಮೈಸೂರಿನ ಡಿ.ವಿ.ಕೆ. ಮೂರ್ತಿ ಅವರಿಂದ |
1977 ಏಪ್ರಿಲ್ | - | ಬೆಂಗಳೂರಿನಲ್ಲಿ ಸಾಹಿತ್ಯ ಪರಿಷತ್ತಿನಿಂದ ಪತ್ರಿಕೋದ್ಯಮ ಕಾರ್ಯಕ್ಕಾಗಿ ಸನ್ಮಾನ |
1977 ಮೇ | - | ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಿಕೋದ್ಯೋಗಿ ಸಮ್ಮೇಳನದಲ್ಲಿ ಪಿ.ಆರ್. ರಾಮಯ್ಯ ಪ್ರಶಸ್ತಿ |
1977 ಸೆಪ್ಟೆಂಬರ್ 10 | - | ಮೈಸೂರಿನಲ್ಲಿ ಸಾರ್ವಜನಿಕ ಸನ್ಮಾನ ಹಾಗೂ “ಪಾವೆಂ ಕಸ್ತೂರಿ’ ಸಂಭಾವನಾ ಗ್ರಂಥದ ಸಮರ್ಪಣೆ |
1977 | - | ‘ಕಳ್ಳಸಾಗಣೆದಾರರ ನಿರ್ಮೂಲನ’ – ಐ.ಬಿ.ಎಚ್. ಪ್ರಕಾಶನ-ಮುಂಬಯಿ |
1978 | - | ‘ಕೆಲವು ಪದ್ಯಗಳು’ -ಪುಸ್ತಕ ಪ್ರಕಾಶನ |
1980 ಜುಲೈ | - | ‘ಮಾನವ ಪ್ರವೃತ್ತಿ ಮತ್ತು ಮೌಲ್ಯಗಳು’ ಪ್ರಕಟನೆ. ಉಡುಪಿಯ ಸರಸ್ವತಿ ಏಜನ್ಸಿ ಅವರಿಂದ |
1981 | - | ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ |
1981 | - | ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದಿಂದ ಪ್ರಶಸ್ತಿ |
1986 | - | ‘ಬಯ್ಯಮಲ್ಲಿಗೆ’ – ತುಳು ಕವನಗಳ ಸಂಕಲನ |
1986 | - | ‘ಸುಭಾಷಿತ ಚಮತ್ಕಾರ’ , ಸಾಹಿತ್ಯ ಭಂಡಾರ |
1987 ಜನೆವರಿ | - | ಮೂಲ್ಕಿಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ |
1989 ನವೆಂಬರ್ 1 | - | ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ |
1990 | - | ‘ವಕ್ರದೃಷ್ಟಿ’ –ಧಾರವಾಡದ ಸಮಾಜ ಪುಸ್ತಕಾಲಯ |
1991 | - | ‘ಮಂಜೂಷಾ’ -ಪ್ರಬಂಧಗಳ ಸಂಕಲನ ಪ್ರಕಟನೆ – ಮಿಂಚಿನಬಳ್ಳಿ ಅವರಿಂದ |
1992 | - | ಪತ್ರಿಕೋದ್ಯಮಕ್ಕಾಗಿ ಅಖಿಲ ಭಾರತ ಮಟ್ಟದ ಬಿ. ಡಿ. ಗೋಯೆಂಕಾ ಪ್ರಶಸ್ತಿ (ಮೊದಲ ಬಾರಿ ಕನ್ನಡಿಗನಿಗೆ) |
1992 ಏಪ್ರಿಲ್ 4 | - | ಪಾವೆಂ ನಿಧನ |
© ೨೦೨೦ - ಸಾಹಿತಿ ಮತ್ತು ಪತ್ರಿಕೋದ್ಯಮಿ ಪಾ. ವೆಂ. ಆಚಾರ್ಯ